ತೆಲುಗು ಜೊಮ್ಮಯ್ಯ -
 	ಸು.1160. ಒಬ್ಬ ವಚನಕಾರ. ಬಸವಣ್ಣನ ಸಮಕಾಲೀನ. ಈತನ ಅಂಕಿತ ತೆಲುಗೇಶ್ವರ ಎಂದು ಹೇಳಿದ ಕವಿಚರಿತೆಕಾರರು ಮುಂದೆ ತಮ್ಮ ಆಭಿಪ್ರಾಯವನ್ನು ಬದಲಾಯಿಸಿ, ಈ ಅಂಕಿತ ತೆಲುಗೇಶ ಮಸಣಯ್ಯನದೆಂದು ತಿದ್ದಿಕೊಂಡರು. ಹೀಗಾಗಿ ತೆಲುಗು ಜೊಮ್ಮಯ್ಯ ವಚನಗಳನ್ನು ಬರೆದಿದ್ದಾನೆಯೋ ಇಲ್ಲವೋ ಖಚಿತವಾಗಿ ಹೇಳುವಂತಿಲ್ಲವೆಂದು ಡಿ.ಎಲ್.ನರಸಿಂಹಾಚಾರ್ಯರ ಅಭಿಪ್ರಾಯ. ಈತನ ಕಾಲ ಕ್ರಿ.ಶ.ಸು.1160 ಎಂದು ಆರ್. ನರಸಿಂಹಾಚಾರ್ಯರು ಹೇಳಿದರೆ ಈತ ಪೆರ್ಮಾಡಿ ಜಗದೇಕಮಲ್ಲನಿಗೆ ಸಮಕಾಲೀನನೆಂಬ ಆಧಾರವನ್ನು ಗಮನಿಸಿ ಡಿ.ಎಲ್.ನರಸಿಂಹಾಚಾರ್ಯರು ಈತನ ಕಾಲವನ್ನು ಸು.1144 ಎಂದು ಹೇಳುತ್ತಾರೆ. ಬಸವಣ್ಣ ತನ್ನ ವಚನಗಳಲ್ಲಿ ಉಲ್ಲೇಖಿಸಿರುವ ಶರಣರು ಮತ್ತು ವಚನಕಾರರಲ್ಲಿ ಈತನೂ ಸೇರಿದ್ದಾನೆ.    

	ಈತನ ಕಥೆ ಹರಿಹರನ ಒಂದು ರಗಳೆಗೆ ವಸ್ತುವಾಗಿದೆ. ಇದು ಮತ್ತು ಇತರ ಮೂಲಗಳಿಂದ ತಿಳಿದುಬರುವ ಈತನ ಕಥೆಯನ್ನು ಸ್ಥೂಲವಾಗಿ ಹೀಗೆ ಸಂಗ್ರಹಿಸುಬಹುದು.   

	ಈತ ಕಲ್ಯಾಣದಲ್ಲಿ ರಾಜ್ಯಭಾರ ಮಾಡುತ್ತಿದ್ದ ಪೆರ್ಮಾಡಿ ರಾಜನ ಮಂತ್ರಿಯಾಗಿದ್ದ. ರಾಜನ ಹೆಂಡತಿ ಲಕುಮಾದೇವಿ, ಶಿವಭಕ್ತೆ. ಒಮ್ಮೆ ರಾಜನ ಪುರಾಣಿಕ ಹರಿಪುರಾಣವನ್ನು ಹೇಳುತ್ತ ಶಿವನಿಂದೆ ಮಾಡಿದ. ಆಗ ಜೊಮ್ಮಯ್ಯ ಕೋಪದಿಂದ ಆತನನ್ನು ಇರಿದು ಕೊಂದ. ಇದರಿಂದ ಅಸಮಾಧಾನಗೊಂಡ ರಾಜ ಜೊಮ್ಮಯ್ಯನನ್ನು ಶಿಕ್ಷಿಸಲು ಪ್ರಯತ್ನಿಸಿದಾಗ ಜೊಮ್ಮಯ್ಯ ಮೆರೆದ ಒಂದು ಪವಾಡದಿಂದ ನಿಜವನ್ನು ಅರಿತ ರಾಜ ಭಕ್ತಿಯಿಂದ ಜೊಮ್ಮಯ್ಯನನ್ನು ಪುರಸ್ಕರಿಸಿದ. 

	ಬೇಟೆಯ ಕಾಯಕದಿಂದ ಜೊಮ್ಮಯ್ಯ ಗುರು ಲಿಂಗ ಜಂಗಮದ ಆರಾಧನೆ ನಡೆಸುತ್ತಿದ್ದ. ಈತನನ್ನು ಕಂಡು ಗೌರವಿಸಲೆಂದು ಒಮ್ಮೆ ಕೊಂಡುಗುಳಿ ಕೇಶಿರಾಜ ಬಂದ. ಜೊಮ್ಮಯ್ಯನ ಮನೆಯಲ್ಲಿ ಮಾಂಸವಿರುವುದನ್ನು ಕಂಡು ಕೇಶಿರಾಜ ಅಸಹ್ಯಪಟ್ಟು ಹಿಂದಿರುಗಿದ. ಬೇಟೆಯಿಂದ ಮರಳಿದ ಜೊಮ್ಮಯ್ಯನಿಗೆ ಇದು ಗೊತ್ತಾಗಿ ತಾನೇ ಹೋಗಿ ಕೇಶಿರಾಜನನ್ನು ಕರೆದ.  ಆದರೆ ಕೇಶಿರಾಜ ಬರಲಿಲ್ಲ. ಅನಂತರ ಕೇಶಿರಾಜ ಮನೆಯಲ್ಲಿ ಶಿವಪೂಜೆಗೆ ಕುಳಿತಾಗ ಜೊಮ್ಮಯ್ಯನ ಮನೆಯಲ್ಲಿ ಲಿಂಗಪೂಜೆ ನಡೆಸಬೇಕೆಂದು ಶಿವಲಿಂಗ ಅಪ್ಪಣೆ ಮಾಡಿತು. ಅದರಂತೆ  ಕೇಶಿರಾಜ ಅಲ್ಲಿ ಹೋಗಿ ಲಿಂಗಪೂಜೆ ನಡೆಸಿದ. ತಟ್ಟೆಯಲ್ಲಿಟ್ಟಿದ್ದ ಮಾಂಸ ಜೊಮ್ಮಯ್ಯನ ಮಹಿಮೆಯಿಂದ ಪಕ್ವಾನ್ನವಾಗಿತ್ತು. ಶಾಪಗ್ರಸ್ತರಾದ ಮೃಗ ಜೀವನ ನಡೆದಿದ್ದ ಇಬ್ಬರು ಗಂಧರ್ವರನ್ನು ಮತ್ತು ಅಮರಿಯರನ್ನು ಜೊಮ್ಮಯ್ಯ ಕೊಂದು ಅವರ ಶಾಪ ವಿಮೋಚನೆ ಮಾಡಿದ್ದ.    

	ಜಂಗಮದಾಸೋಹಕ್ಕಾಗಿ ಬೇಟೆಯಾಡುತ್ತಿದ್ದ ಜೊಮ್ಮಯ್ಯನಿಗೆ ಒಮ್ಮೆ ಶಿವ ವ್ಯಾಘ್ರ ರೂಪದಲ್ಲಿ ಕಾಣಿಸಿಕೊಂಡ. ಅದನ್ನು ಕಂಡು ಹೆದರಿದ ಜೊಮ್ಮಯ್ಯ ಬಿಲ್ವಪತ್ರದ ಮರವನ್ನು ಏರಿಕುಳಿತ. ಶಿವಲಿಂಗರೂಪದಲ್ಲಿ ಅದೇ ಮರದ ಕೆಳಗೆ ನೆಲಸಿದ. ಕೆಳಗೆ ಲಿಂಗವನ್ನು ಕಂಡ ಜೊಮ್ಮಯ್ಯ ಬಿಲ್ವಪತ್ರೆಯನ್ನು ಕಿತ್ತು ಹಾಕತೊಡಗಿದ. ಶಿವ ಅದನ್ನು ಸ್ವೀಕರಿಸಿ ಜೊಮ್ಮಯ್ಯನಿಗೆ ಮುಕ್ತಿಯನ್ನು ಕರುಣಿಸಿದ.                  								(ಕೆ.ಎಂ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ